ಸಾಮಾನ್ಯ ಕಳೆಯಲ್ಲಿನ ಅಸಾಮಾನ್ಯ ರಹಸ್ಯಗಳು
ಕೈತಪ್ಪಿ ತುರಿಕೆ ಸೊಪ್ಪಿನ ಗಿಡಕ್ಕೆ (Stinging Nettle) ಮೈ ತಗಲಿದರೆ, ಆ ಕ್ಷಣದ ಚುರುಗುಟ್ಟುವ ನೋವು, ಉರಿ… ಆ ನೆನಪೇ ಮೈ ಜುಮ್ಮೆನಿಸುತ್ತದೆ ಅಲ್ಲವೇ? ಕ್ಷಣಮಾತ್ರದಲ್ಲಿ ಚರ್ಮದ ಮೇಲೆ ಕೆಂಪು ದದ್ದುಗಳನ್ನು ಎಬ್ಬಿಸುವ ಈ ಗಿಡವನ್ನು ನಾವೆಲ್ಲರೂ ಒಂದು ಉಪದ್ರವವೆಂದು ದೂರವಿಡುತ್ತೇವೆ. ಆದರೆ, ಈ ಭಯಾನಕ ಸಸ್ಯವು ತನ್ನೊಳಗೆ ಅಘಾಧವಾದ ಚಿಕಿತ್ಸಾ ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದೆ ಎಂದು ನಿಮಗೆ ತಿಳಿದಿದೆಯೇ?

ಈ ಲೇಖನದಲ್ಲಿ, ಐತಿಹಾಸಿಕ ಮತ್ತು ವೈದ್ಯಕೀಯ ದಾಖಲೆಗಳ ಆಧಾರದ ಮೇಲೆ, ಯುರ್ಟಿಕಾ ಯುರೆನ್ಸ್ (Urtica urens) ಎಂಬ ಈ ಗಿಡದ ಅತ್ಯಂತ ಅಚ್ಚರಿಯ ಮತ್ತು ಅನಿರೀಕ್ಷಿತ ಔಷಧೀಯ ಉಪಯೋಗಗಳನ್ನು ನಾವು ಈ ಕೆಳಗೆ ನೊಡೋಣ.
ಬೆಂಕಿಯನ್ನೇ ಮೆಟ್ಟಿನಿಂತ ಬೆಂಕಿ: ಸುಟ್ಟಗಾಯ ಮತ್ತು ಬೊಬ್ಬೆಗಳಿಗೆ ಚಿಕಿತ್ಸೆ
ತುರಿಕೆ ಗಿಡದ ಕಥೆಯಲ್ಲಿ ನಾವು ಮೊದಲು ಎದುರಿಸುವ ವಿಪರ್ಯಾಸವೆಂದರೆ, ಅದರ ಸುಡುವ ಗುಣವೇ ಅದಕ್ಕೆ ಮದ್ದಾಗಿದೆ. ನಂಬಲು ಕಷ್ಟವಾದರೂ, ಇದು ಸುಟ್ಟಗಾಯಗಳಿಗೆ ಒಂದು ಅದ್ಭುತ ಶಮನಕಾರಿ ಔಷಧಿ. ಮೊದಲ ಹಂತದ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಲು ತುರಿಕೆ ಗಿಡದ ಟಿಂಚರ್ (ತಾಜಾ ಗಿಡವನ್ನು ಆಲ್ಕೋಹಾಲ್ನಲ್ಲಿ ನೆನೆಸಿ ತಯಾರಿಸಿದ ದ್ರವರೂಪದ ಸಾರ) ಅನ್ನು ಬಳಸಲಾಗುತ್ತದೆ.
ಕುದಿಯುತ್ತಿರುವ ಸಲ್ಫ್ಯೂರಿಕ್ ಆಮ್ಲವು ಮುಖಕ್ಕೆ ಸಿಡಿದ ವ್ಯಕ್ತಿಯೊಬ್ಬರ ಪ್ರಕರಣವು ಇದಕ್ಕೆ ಉತ್ತಮ ಉದಾಹರಣೆ. ಯುರ್ಟಿಕಾದಿಂದ ತಯಾರಿಸಿದ ಲೋಷನ್ ಅನ್ನು ಹಚ್ಚಿದಾಗ, ಅದು “ತ್ವರಿತವಾಗಿ ನೋವನ್ನು ನಿವಾರಿಸಿತು ಮತ್ತು ಕೆಲವೇ ದಿನಗಳಲ್ಲಿ ಗಾಯವನ್ನು ಗುಣಪಡಿಸಿತು.”
ಈ ಸುಡುವ ಗುಣಕ್ಕೆ ಹೆಸರುವಾಸಿಯಾದ ಗಿಡವು ಸುಟ್ಟಗಾಯಗಳನ್ನು ಶಮನಗೊಳಿಸುವ ಗುಣ ಇರುವುದು ಪ್ರಕೃತಿಯ ಒಂದು ದೊಡ್ಡ ವಿಸ್ಮಯ.

ಇದೇ ಗಿಡವು ಚರ್ಮದ ಮೇಲಿನ ಪಿತ್ತಗಾದರಿ – ದದ್ದುಗಳಿಗೂ ಮದ್ದು ಎಂಬುದು ಮತ್ತೊಂದು ಅಚ್ಚರಿ.
ದದ್ದು ಮತ್ತು ಚುಚ್ಚುಕೆರೆತಕ್ಕೆ ಒಂದು ಅಸಂಭವ ಚಿಕಿತ್ಸೆ
ಹೋಮಿಯೋಪಥಿಯ ‘ಸಮಃ ಸಮಂ ಶಮಯತಿ‘ (like cures like) ಎಂಬ ಮೂಲಭೂತ ತತ್ವದ ಪ್ರಕಾರ, ಅಂದರೆ, ಆರೋಗ್ಯವಂತ ವ್ಯಕ್ತಿಯಲ್ಲಿ ರೋಗಲಕ್ಷಣಗಳನ್ನು ಉಂಟುಮಾಡುವ ವಸ್ತುವೇ, ಅಲ್ಪ ಪ್ರಮಾಣದಲ್ಲಿ ನೀಡಿದಾಗ, ಅದೇ ರೋಗಲಕ್ಷಣಗಳನ್ನು ಗುಣಪಡಿಸುತ್ತದೆ. ಈ ತತ್ವದಂತೆ, ಯುರ್ಟಿಕಾ ಯುರೆನ್ಸ್ ಗಿಡವು ತುರಿಕೆ-ದದ್ದು (urticaria) ನಿವಾರಣೆಗೆ ಪ್ರಮುಖ ಔಷಧಿಯಾಗಿದೆ.
ಒಬ್ಬ ಯುವ ವಿವಾಹಿತ ಮಹಿಳೆಯು 16 ತಿಂಗಳ ಕಾಲ ಗೋಧಿ-ಮುಕ್ತ ಆಹಾರ ಪತ್ತೆಯನ್ನು ಪಾಲಿಸುತ್ತಿದ್ದರೂ, ಚುಚ್ಚುಕೆರೆತ (ಪಿತ್ತಗಾದರಿ)ದಿಂದ ಬಳಲುತ್ತಿದ್ದಳು. ಆದರೆ, ಪೂರ್ಣ ಗೋಧಿ ಆಹಾರವನ್ನು ಪುನರಾರಂಭಿಸಿ ಯುರ್ಟಿಕಾ ಯುರೆನ್ಸ್ ತೆಗೆದುಕೊಂಡ ಕೇವಲ ಹತ್ತು ದಿನಗಳಲ್ಲಿ ಆಕೆಯ ದದ್ದುಗಳು ಸಂಪೂರ್ಣವಾಗಿ ಮಾಯವಾದವು. ಚಿಪ್ಪುಮೀನು (shellfish) ತಿಂದಾಗ ಉಂಟಾಗುವ ಚುಚ್ಚುಕೆರೆತಕ್ಕೂ ಇದು ಪರಿಣಾಮಕಾರಿ ಔಷಧಿಯಾಗಿದೆ.
ಲೇಖಕ ಡಾ. ಎನ್. ಎಂ. ಚೌಧುರಿ ಅವರು ಒಂದು ವಿಚಿತ್ರ ಲಕ್ಷಣವನ್ನು ಹೀಗೆ ಉಲ್ಲೇಖಿಸುತ್ತಾರೆ:
“ಯುರ್ಟಿಕಾ ಯುರೆನ್ಸ್ನ ಒಂದು ದೊಡ್ಡ ವಿಶೇಷತೆಯೆಂದರೆ, ರೋಗಿಯು ಮಲಗಿದ ತಕ್ಷಣ ದದ್ದು ಮತ್ತು ತುರಿಕೆ ಎರಡೂ ಮಾಯವಾಗುತ್ತವೆ ಮತ್ತು ಮಲಗಿದ ಭಂಗಿಯಿಂದ ಎದ್ದ ತಕ್ಷಣ ಮತ್ತೆ ಕಾಣಿಸಿಕೊಳ್ಳುತ್ತವೆ.”
ಶ್ರೀಮಂತರ ರಹಸ್ಯ ಅಸ್ತ್ರ: ಗೌಟ್ ನೋವಿಗೆ ರಾಮಬಾಣ
ಈ ಗಿಡದ ಶಕ್ತಿಯನ್ನು ಅರಿತಿದ್ದ ಪ್ರಮುಖ ವೈದ್ಯರಲ್ಲಿ ಡಾ. ಬರ್ನೆಟ್ ಒಬ್ಬರು. ತೀವ್ರತರವಾದ ಗೌಟ್ (acute gout) ಚಿಕಿತ್ಸೆಗಾಗಿ ಅವರು ಯುರ್ಟಿಕಾ ಯುರೆನ್ಸ್ ಅನ್ನು ತಮ್ಮ ಪ್ರಮುಖ ಅಸ್ತ್ರವೆಂದು ಪರಿಗಣಿಸಿದ್ದರು. “ಲಾರ್ಡ್ ಎಕ್ಸ್” ಎಂಬ ವ್ಯಕ್ತಿಯೊಬ್ಬರು ಗೌಟ್ಗಾಗಿ “ಅತ್ಯಂತ ಶ್ರೇಷ್ಠ ತಜ್ಞರನ್ನು” ಸಂಪರ್ಕಿಸಿ ಮತ್ತು ಪ್ರಮುಖ ಸ್ಪಾಗಳಿಗೆ ಭೇಟಿ ನೀಡಿದ್ದರೂ, ಯುರ್ಟಿಕಾ ಯುರೆನ್ಸ್ ತಾನು ತೆಗೆದುಕೊಂಡ ಅತ್ಯಂತ ಪರಿಣಾಮಕಾರಿ ಔಷಧಿ ಎಂದು ಕಂಡುಕೊಂಡಿದ್ದರು.
ಲಾರ್ಡ್ ಎಕ್ಸ್ ಹೀಗೆ ಹೇಳುತ್ತಾರೆ:

” ನನಗೆ ಯುರ್ಟಿಕಾದಷ್ಟು ಸಹಾಯ ಮಾಡಿದ ಬೇರೆ ಯಾವುದೇ ಔಷಧಿಯನ್ನು ನಾನು ತೆಗೆದುಕೊಂಡಿಲ್ಲ; ಅದರಲ್ಲಿ ಯಾವುದೇ ಸಂದೇಹವಿಲ್ಲ.”
ಈ ಔಷಧಿಯನ್ನು ತೆಗೆದುಕೊಳ್ಳುವ ರೋಗಿಗಳು ಆಗಾಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಸಣ್ಣ “ಹರಳು“ಗಳನ್ನು ಮೂತ್ರದಲ್ಲಿ ವಿಸರ್ಜಿಸುತ್ತಿದ್ದುದನ್ನು ಗಮನಿಸಲಾಗಿದೆ. ಇದು ಗೌಟ್ಗೆ ಕಾರಣವಾಗುವ ಯೂರಿಕ್ ಆಮ್ಲವನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ ಎಂದು ಸೂಚಿಸುತ್ತದೆ.
ನಿಗೂಢವಾದ ಹಾಲು ವರ್ಧಕ ಕಳೆ
ಈ ಸಸ್ಯದ ಅತ್ಯಂತ ಅಚ್ಚರಿಯ ಪರಿಣಾಮಗಳಲ್ಲಿ ಇದೂ ಒಂದು. ತುರಿಕೆ ಗಿಡದ ಎರಡು ಕಪ್ಗಳಷ್ಟು ಗಟ್ಟಿಯಾದ ಕಷಾಯವನ್ನು ಕುಡಿದ ಮಹಿಳೆಯೊಬ್ಬಳ ವಿಷಪ್ರಾಶನದ ಪ್ರಕರಣವು ಗಮನಸೆಳೆಯುವಂತಿದೆ. ತೀವ್ರವಾದ ಚರ್ಮದ ಅಲ್ಲರ್ಜಿಯ ನಂತರ, ಒಂದು ಅದ್ಭುತ ಫಲಿತಾಂಶ ಕಂಡುಬಂದಿತು.
ಆಕೆಗೆ ಮೂರು ವರ್ಷಗಳಿಂದ ಮಕ್ಕಳಾಗಿರಲಿಲ್ಲ ಮತ್ತು ತನ್ನ ಹಿಂದಿನ ಹನ್ನೆರಡು ಮಕ್ಕಳಲ್ಲಿ ಯಾರಿಗೂ ಹಾಲುಣಿಸಿರಲಿಲ್ಲ. ಆದರೂ, “ಆಕೆಯ ಸ್ತನಗಳು ಊದಿಕೊಂಡು, ಮೊದಲು ಸೀರಮ್, ನಂತರ ಶುದ್ಧ ಹಾಲು ಸ್ರವಿಸಲು ಪ್ರಾರಂಭಿಸಿತು; ಮತ್ತು ಎಂಟು ದಿನಗಳ ಕಾಲ ಯಥೇಚ್ಛವಾಗಿ ಹಾಲು ಉತ್ಪತ್ತಿಯಾಯಿತು.” ಅಂದಿನಿಂದ, ಹೆರಿಗೆಯ ನಂತರ “ಹಾಲಿನ ಸ್ರವಿಸುವಿಕೆಯ ಕೊರತೆ ಅಥವಾ ಸಂಪೂರ್ಣ ಅನುಪಸ್ಥಿತಿ” (Agalactia) ಇರುವ ಸಂದರ್ಭಗಳಲ್ಲಿ ಯುರ್ಟಿಕಾ ಯುರೆನ್ಸ್ ಒಂದು ವಿಶ್ವಾಸಾರ್ಹ ಔಷಧಿಯಾಗಿ ಗುರುತಿಸಲ್ಪಟ್ಟಿದೆ.
ತೋಟದಿಂದ ಮರೆತುಹೋದ ಜ್ವರನಿವಾರಕ
ಗೌಟ್ ಚಿಕಿತ್ಸೆಯಲ್ಲಿ ತುರಿಕೆ ಗಿಡದ ಸಾಮರ್ಥ್ಯವನ್ನು ಸಾಬೀತುಪಡಿಸಿದ ಅದೇ ಡಾ. ಬರ್ನೆಟ್, ಅದರ ಮತ್ತೊಂದು ರಹಸ್ಯವನ್ನು ಅನಿರೀಕ್ಷಿತ ಮೂಲದಿಂದ ಕಂಡುಕೊಂಡರು. ಚಳಿಜ್ವರ (ague – ಮಲೇರಿಯಾ ಜ್ವರ) ವಿರುದ್ಧ ತುರಿಕೆ ಗಿಡದ ಶಕ್ತಿಯನ್ನು ಅವರು ತಮ್ಮ ಮನೆಗೆಲಸದವಳಿಂದ ತಿಳಿದುಕೊಂಡ ಕಥೆ ಬಹಳ ಆಸಕ್ತಿದಾಯಕವಾಗಿದೆ.
ಆಕೆ ಬರ್ನೆಟ್ ಅವರ ರೋಗಿಯನ್ನು ತುರಿಕೆ ಗಿಡದ ಚಹಾದಿಂದ ಗುಣಪಡಿಸಿದ್ದಳು. ನಂತರ, ಬರ್ನೆಟ್ ಅವರು 1893ರ ವಸಂತಕಾಲದಲ್ಲಿ ಭಾರತ ಮತ್ತು ಬರ್ಮಾದಿಂದ ಹಿಂತಿರುಗಿದ ಅಧಿಕಾರಿಗಳ ಮಲೇರಿಯಾದಂತಹ ತೀವ್ರತರವಾದ ಪ್ರಕರಣಗಳಲ್ಲಿಯೂ ಇದನ್ನು ಯಶಸ್ವಿಯಾಗಿ ಬಳಸಿದರು. ಇದು ಪೂರ್ವ ದೇಶಗಳ ಜ್ವರಗಳಿಗೆ “ಮುಖ್ಯ ಔಷಧಿ” ಎಂದು ನಂತರ ಪರಿಗಣಿಸಲ್ಪಟ್ಟಿತ್ತು. ಇಲ್ಲಿ ಕುತೂಹಲಕಾರಿಯಾದ ವಿಷಯವೆನೇಂದರೇ, ಈ ಔಷಧಿಯು ಕೆಲವೊಮ್ಮೆ ರೋಗಿಗೆ “ತೀವ್ರವಾದ ಜ್ವರವನ್ನು ಹೆಚುಮಾಡಿ” ನಂತರ “ತ್ವರಿತ ಮತ್ತು ಸಂಪೂರ್ಣ ಚೇತರಿಕೆ“ಯನ್ನು ನೀಡುತ್ತಿತ್ತು.
ಕಳೆಗಳಲ್ಲಿ ಅಡಗಿದ ಜ್ಞಾನ
ಹೀಗೆ, ಕಾಲಿನಡಿಯ ಕಳೆ ಎಂದು ತುಳಿದುಹಾಕುವ ತುರಿಕೆ ಗಿಡ, ತನ್ನ ಮುಳ್ಳಿನ ಮರೆಯಲ್ಲಿ ಆರೋಗ್ಯದ ಅದ್ಬುತ ರೋಗ ನಿವಾರಣ ಶಕ್ತಿಯನ್ನು ಬಚ್ಚಿಟ್ಟುಕೊಂಡಿದೆ. ಅದರ ಕಥೆಯು ನಿಸರ್ಗದ ವಿನಯಶೀಲ ಪಾಠವಾಗಿದೆ.
ಸಾಮಾನ್ಯವೆಂದು ನಾವು ಕಡೆಗಣಿಸುವ ಸಸ್ಯಗಳು ಎಂತಹ ಅದ್ಭುತ ಶಕ್ತಿಯನ್ನು ಹೊಂದಿರಬಹುದು ಎಂಬುದಕ್ಕೆ ಇದೊಂದು ಅದ್ಬುತ ಉದಾಹರಣೆ.
ಇಂತಹ ಒಂದು ಸಾಮಾನ್ಯ, ಸರಳವಾದ ಕಳೆಯಿಂದ ಆಳವಾದ ಚಿಕಿತ್ಸಾ ರಹಸ್ಯಗಳನ್ನು ಹೊರತರುವ ಹೋಮಿಯೋಪಥಿ ಪದ್ಧತಿ ಎಷ್ಟು ಅತ್ಯದ್ಬುತವಾಗಿದೆಯಲ್ಲವೆ!.