ಪೀಪಲ್ ಪ್ಲೀಸರ್ (People Pleaser) – ಜನರನ್ನು ಮೆಚ್ಚಿಸುವ ಜನರು

1.0. ಪರಿಚಯ: ಜನರನ್ನು ಮೆಚ್ಚಿಸುವ ಸ್ವಭಾವದ ಒಂದು ಆಳವಾದ ನೋಟ

ಕಳೆದ 2 ದಶಕಗಳಿಂದ ಹೋಮಿಯೋಪತಿ ವೈದ್ಯನಾಗಿ ಮತ್ತು ಶಿಕ್ಷಕನಾಗಿ, ನಾನು ಅನೇಕ ರೋಗಿಗಳನ್ನು ನೋಡಿದ್ದೇನೆ. ಆಧುನಿಕ ಮನಶಾಸ್ತ್ರವು “People Pleasing” (ಜನರನ್ನು ಮೆಚ್ಚಿಸುವ ವರ್ತನೆ) ಎಂದು ಕರೆಯುವ ಸ್ವಭಾವವನ್ನು ನಾವು ಹೋಮಿಯೋಪತಿಯಲ್ಲಿ ವಿಭಿನ್ನವಾಗಿ ನೋಡುತ್ತೇವೆ.

ಇದು ಇಚ್ಛಾಶಕ್ತಿಯ ಒಂದು ರೋಗಶಾಸ್ತ್ರೀಯ ಸ್ಥಿತಿ (Pathology of Will). ನನ್ನ ಅನುಭವದಲ್ಲಿ, ಇತರರನ್ನು ಮೆಚ್ಚಿಸುವ ಹಂಬಲವು ಇದು ಕೇವಲ ಒಳ್ಳೆಯತನವಲ್ಲ; ನಿರಂತರವಾಗಿ ಇತರರನ್ನು ಮೆಚ್ಚಿಸಲು ತನ್ನತನವನ್ನೇ ಅಡಗಿಸಿಟ್ಟುಕೊಳ್ಳುವ ಪ್ರವೃತ್ತಿಯು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಮೂಲ ಕಾರಣವಾಗಬಲ್ಲದು ಎಂಬುದನ್ನು ಗುರುತಿಸುವುದು ಚಿಕಿತ್ಸೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.

ಹೋಮಿಯೋಪಥಿಯ ಪ್ರಕಾರ, ಭಾವನೆಗಳನ್ನು ನಿರಂತರವಾಗಿ ಹತ್ತಿಕ್ಕುವುದು ಮತ್ತು ನಿರಂತರ ಆತಂಕವು ದೈಹಿಕ ಕಾಯಿಲೆಗಳ ಮೂಲ ಕಾರಣಗಳಾಗಿವೆ. ಮನಸ್ಸಿನಲ್ಲಿ ಉಂಟಾಗುವ ಸಂಘರ್ಷವು ದೇಹದಲ್ಲಿ ಸ್ಪಷ್ಟವಾದ ರೋಗಲಕ್ಷಣಗಳಾಗಿ ಮಾರ್ಪಡುತ್ತವೆ. ಹೀಗೆ, ಮಾನಸಿಕ ಸ್ಥಿತಿಯು ದೈಹಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ.

ರೋಗಿಯೊಬ್ಬರು ನಗುತ್ತಾ ತಮ್ಮ ಜೀವನದ ಸಂಕಟಗಳನ್ನು ಹೇಳಿಕೊಳ್ಳುವಾಗ, ಅಥವಾ ಮಗುವು ಅತಿಯಾದ ಒಳ್ಳೆಯತನ ತೋರಿಸುತ್ತಾ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವಾಗ, ನಾವು ಆಳವಾಗಿ ನೋಡಬೇಕು.

ನಮ್ಮ ಮೆಟೀರಿಯಾ ಮೆಡಿಕಾದಲ್ಲಿ ಬರುವ ಪ್ರಮುಖ "ಪೀಪಲ್ ಪ್ಲೀಸರ್" (ಜನರನ್ನು ಮೆಚ್ಚಿಸುವ) ಔಷಧಿಗಳು, ಅವರು ಏಕೆ ಹಾಗೆ ವರ್ತಿಸುತ್ತಾರೆ, ಅವರು ಅನುಭವಿಸುವ ನರಕಯಾತನೆ ಮತ್ತು ಬಾಲ್ಯದಲ್ಲೇ ಅವರನ್ನು ಹೇಗೆ ಗುರುತಿಸುವುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

2. ಜನರನ್ನು ಮೆಚ್ಚಿಸುವ ಸ್ವಭಾವಕ್ಕೆ ಪ್ರಮುಖ ಹೋಮಿಯೋಪಥಿ ಔಷಧಿಗಳು

2.1. ಕಾರ್ಸಿನೋಸಿನ್ (Carcinosin):

ಪರಿಪೂರ್ಣ ಮಗು” (ಅಸ್ತಿತ್ವಕ್ಕಾಗಿ ಇತರನ್ನು ಮೆಚ್ಚಿಸುವವ)

ವರ್ತನೆಗೆ ಕಾರಣ: ಇದು ಅತ್ಯಂತ ದುರಂತದ “ಪ್ಲೀಸರ್“. ಕಾರ್ಸಿನೋಸಿನ್ ರೋಗಿಯು ಇತರರನ್ನು ಮೆಚ್ಚಿಸುವುದು ಬದುಕುಳಿಯುವ ಸಲುವಾಗಿ. ಸಾಮಾನ್ಯವಾಗಿ ಇವರ ಬಾಲ್ಯದಲ್ಲಿ ಪೋಷಕರ ಅತಿಯಾದ ನಿಯಂತ್ರಣ ಅಥವಾ ಪ್ರಾಬಲ್ಯವಿರುತ್ತದೆ. ತಾನು ಪ್ರೀತಿಸಲ್ಪಡಲು ಅಥವಾ ಟೀಕೆಯಿಂದ ತಪ್ಪಿಸಿಕೊಳ್ಳಲು “ಪರಿಪೂರ್ಣ“ನಾಗಿರಬೇಕು ಎಂದು ಮಗು ಭಾವಿಸುತ್ತದೆ. ಇವರು ತಂದೆ ಅಥವಾ ಅಧಿಕಾರದಲ್ಲಿರುವವರಿಂದ ಮೆಚ್ಚುಗೆ ಪಡೆಯಲು ಹಾತೊರೆಯುತ್ತಾರೆ.

ಅವರು ಅನುಭವಿಸುವ ಯಾತನೆ: ಇವರು ತಮ್ಮ ಸ್ವಂತ ಆಸೆಗಳನ್ನು ಸಂಪೂರ್ಣವಾಗಿ ಅಡಗಿಸಿಟ್ಟುಕೊಳ್ಳುತ್ತಾರೆ (Suppression). ಜಗಳಗಳಿಂದ ತಪ್ಪಿಸಿಕೊಳ್ಳಲು ಇತರರು ಹೆಳುವುದೆಲ್ಲವನ್ನೂ ಒಪ್ಪಿಕೊಳ್ಳುತ್ತಾರೆ. ಈ ತರವಾದ ಮಾನಸಿಕ ದಮನವು ದೈಹಿಕ ಮಟ್ಟದಲ್ಲಿ ಪ್ರತಿಕ್ರಿಯೆಯ ಕೊರತೆಗೆ ಕಾರಣವಾಗುತ್ತದೆ. ಇದು ಬಾಲ್ಯದಲ್ಲಿ ಮರುಕಳಿಸುವ ಸೋಂಕುಗಳಿಗೆ ಮತ್ತು ನಂತರದ ವರ್ಷಗಳಲ್ಲಿ ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ.

ಕಾಲ್ಪನಿಕ ಉದಾಹರಣೆ: ೪೦ ವರ್ಷದ ಮಹಿಳೆ. ತೀವ್ರ ಸುಸ್ತಿನಿಂದ ಬಳಲುತ್ತಿದ್ದಳು. ಅವಳು ಶಾಲೆಯ ಸಮಿತಿಯಲ್ಲಿದ್ದಳು, ಪೂರ್ಣ ಸಮಯದ ಉದ್ಯೋಗ ಮಾಡುತ್ತಿದ್ದಳು, ವಯಸ್ಸಾದ ಪೋಷಕರನ್ನು ನೋಡಿಕೊಳ್ಳುತ್ತಿದ್ದಳು. ಅವಳು ಯಾರಿಗೂ “ಇಲ್ಲ” ಎಂದು ಹೇಳುತ್ತಿದ್ದಿಲ್ಲ. “ಎಲ್ಲರೂ ಸಂತೋಷವಾಗಿರಲಿ ಎಂಬುದೇ ನನ್ನ ಆಸೆ” ಎನ್ನುತ್ತಿದ್ದಳು. ಆದರೆ ಅವಳ ಕಣ್ಣುಗಳಲ್ಲಿ ಆಳವಾದ ವಿಷಾದವಿತ್ತು. ಅವಳು ಪ್ರಕೃತಿಯನ್ನು, ಪ್ರಾಣಿಗಳನ್ನು ಮತ್ತು ಸಂಗೀತವನ್ನು ಪ್ರೀತಿಸುತ್ತಿದ್ದಳು. ಅವಳು ಯಾವಾಗಲೂ ಅಚ್ಚುಕಟ್ಟಾಗಿರುತ್ತಿದ್ದಳು (Fastidious), ಆದರೆ ಅದು ಸ್ವಚ್ಛತೆಗಲ್ಲ, ಬದಲಿಗೆ ಟೀಕೆಗೆ ಹೆದರಿ.

ಬಾಲ್ಯದಲ್ಲೇ ಗುರುತಿಸುವುದು ಹೇಗೆ?ಏಂಜಲ್ ಚೈಲ್ಡ್” (ದೇವಕನ್ಯೆ) ಬಗ್ಗೆ ಎಚ್ಚರವಿರಲಿ. ತಾಯಿ ಬಂದು, “ಡಾಕ್ಟರ್, ಇವನು ತುಂಬಾ ಒಳ್ಳೆಯವನು, ಎಂದೂ ತುಂಟತನ ಮಾಡುವುದಿಲ್ಲ, ಹೇಳಿದ ಮಾತನ್ನು ಕೇಳುತ್ತಾನೆ,” ಎಂದು ಹೇಳಿದರೆ, ನಾವು ಯೋಚನೆಮಾಡಬೇಕಾಗುತ್ತದೆ.

  • ಲಕ್ಷಣಗಳು: ಚಿಕ್ಕ ವಯಸ್ಸಿನಲ್ಲೇ ದೊಡ್ಡವರಂತೆ ವರ್ತಿಸುವುದು (Precocity).
  • ಸೂಕ್ಷ್ಮತೆ: ಗದರಿಸಿದರೆ ತಡೆದುಕೊಳ್ಳಲಾರರು (Sensitive to reprimand).
  • ಅನುಕಂಪ ಮತ್ತು ಪ್ರಾಣಿ ಪ್ರೀತಿ.

2.2. ಸ್ಟ್ಯಾಫಿಸಾಗ್ರಿಯಾ (Staphysagria):

"ಗೌರವಯುತ ಹುತಾತ್ಮ" (ಘನತೆಗಾಗಿ ಮೆಚ್ಚಿಸುವವ)

ವರ್ತನೆಗೆ ಕಾರಣ: ಇವರು ತಮ್ಮ ಘನತೆಯನ್ನು ಕಾಪಾಡಿಕೊಳ್ಳಲು ಮತ್ತು ಸಂಘರ್ಷವನ್ನು ತಪ್ಪಿಸಲು ಜನರನ್ನು ಮೆಚ್ಚಿಸುತ್ತಾರೆ. ಇವರು ಜಗಳವಾಡಲು ಇಷ್ಟಪಡುವುದಿಲ್ಲ, ತಾವು ಉದಾತ್ತರು ಎಂದು ಭಾವಿಸಿಕೊಳ್ಳಲು ಬಯಸುತ್ತಾರೆ. ಇವರು ಶಾಂತಿಯನ್ನು ಕಾಪಾಡಲು ಇತರರ ಇಚ್ಛೆಗೆ ಮಣಿಯುತ್ತಾರೆ.

ಅವರು ಅನುಭವಿಸುವ ಯಾತನೆ: ಇದು “ಅಡಗಿಸಿಟ್ಟ ಕೋಪ”ದ (Suppressed indignation) ಔಷಧಿ. ಇವರು ಅವಮಾನಗಳನ್ನು ನುಂಗಿಕೊಳ್ಳುತ್ತಾರೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಶೋಷಣೆಗೆ ಒಳಗಾದರೂ ಮೌನವಾಗಿರುತ್ತಾರೆ. ಈ ದಮನವು ಹೊಟ್ಟೆ ನೋವು (Colic), ಹಲ್ಲಿನ ಸಮಸ್ಯೆಗಳು ಅಥವಾ ಗರ್ಭಾಶಯದ ಗೆಡ್ಡೆಗಳಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಕಾಲ್ಪನಿಕ ಉದಾಹರಣೆ: ಒಬ್ಬ ಮಹಿಳೆ ತೀವ್ರ ತಲೆನೋವು ಮತ್ತು ಹೊಟ್ಟೆ ನೋವಿನಿಂದ ಬಳಳುತ್ತಿರುತ್ತಾಳೆ. ಆಕೆಯ ಪತಿ ತುಂಬಾ ಒರಟು ಸ್ವಭಾವದವನು. ಕ್ಲಿನಿಕ್‌ನಲ್ಲಿ ಅವನು ಅವಳ ಮಾತನ್ನು ಮಧ್ಯದಲ್ಲಿ ತಡೆಯುತ್ತಾನೆ, ಅವಮಾನಿಸುತ್ತಾನೆ. ಅವಳು ನಗುತ್ತಾ, “ಅವರ ಸ್ವಭಾವವೇ ಹಾಗೆ, ಮನಸ್ಸು ಒಳ್ಳೆಯದು,” ಎನ್ನುತ್ತಾಳೆ. ಅವಳು ತನ್ನ ಕೋಪವನ್ನು ನುಂಗಿಕೊಂಡು, “ನಾನು ಜಗಳವಾಡುವಷ್ಟು ಕೀಳು ಮಟ್ಟದವಳಲ್ಲ,” ಎಂದುಕೊಳ್ಳುತ್ತಾಳೆ. ಆದರೆ ಅವಳ ದೇಹವು ನಡುಗುತ್ತಿರುತ್ತದೆ.

ಬಾಲ್ಯದಲ್ಲೇ ಗುರುತಿಸುವುದು ಹೇಗೆ?

  • ಬೇರೆಯವರು ಹೊಡೆದರೂ ತಿರುಗಿ ಹೊಡೆಯದ ಮಗು.
  • ಸಣ್ಣ ಅವಮಾನವನ್ನೂ ಸಹಿಸದ, ಆದರೆ ಅದನ್ನು ಹೊರಹಾಕದ ಮಗು.
  • ಕೋಪ ಬಂದಾಗ ವಸ್ತುಗಳನ್ನು ಎಸೆಯುವ ಮಗು, ಆದರೆ ನಂತರ ಪಶ್ಚಾತ್ತಾಪ ಪಡುತ್ತದೆ.

2.3. ಪಲ್ಸಟಿಲಾ (Pulsatilla):

"ಆಶ್ರಯ ಬಯಸುವ ಬಳ್ಳಿ" (ಅವಲಂಬನೆಗಾಗಿ ಮೆಚ್ಚಿಸುವವರು)

ವರ್ತನೆಗೆ ಕಾರಣ: ಪಲ್ಸಟಿಲಾ ರೋಗಿಗಳು ಪ್ರೀತಿಯನ್ನು ಪಡೆಯಲು ಮೆಚ್ಚಿಸುತ್ತಾರೆ. ಇವರು ಮೃದು ಸ್ವಭಾವದವರು, ಬಾಗುವವರು ಅಥವಾ ವಿಧೇಯತೆ ತೋರಿಸುವವರು (Yielding). ಇವರು ಒಂಟಿಯಾಗಿರಲು ಹೆದರುತ್ತಾರೆ, ಆದ್ದರಿಂದ ರಕ್ಷಣೆ ಮತ್ತು ಪ್ರೀತಿಗಾಗಿ ಇತರರೊಂದಿಗೆ ಹೊಂದಿಕೊಳ್ಳುತ್ತಾರೆ.

ಅವರು ಅನುಭವಿಸುವ ಯಾತನೆ: ಇವರು ತಮ್ಮತನವನ್ನೇ ಕಳೆದುಕೊಳ್ಳುತ್ತಾರೆ. ಗಂಡ, ತಂದೆ ಅಥವಾ ಶಿಕ್ಷಕರು ಏನನ್ನು ಬಯಸುತ್ತಾರೋ ಹಾಗೆಯೇ ಬದಲಾಗುತ್ತಾರೆ. ಇವರಿಗೆ ಬೇಕಾದ ಗಮನ (Attension) ಸಿಗದಿದ್ದರೆ, ಅಸೂಯೆ ಮತ್ತು ಕೈಬಿಟ್ಟ / ತ್ಯಜಿಸಿದ ಭಾವನೆ (Forsaken feeling) ಉಂಟಾಗುತ್ತದೆ. ಇವರು ಸುಲಭವಾಗಿ ಅಳುತ್ತಾರೆ ಮತ್ತು ಸಮಾಧಾನ ಮಾಡಿದರೆ ಸರಿಹೋಗುತ್ತಾರೆ.

ಕಾಲ್ಪನಿಕ ಉದಾಹರಣೆ: ಒಬ್ಬ ಯುವತಿ ಅಳುತ್ತಾ ಕ್ಲಿನಿಕ್‌ಗೆ ಬರುತ್ತಾಳೆ. “ನನ್ನ ಗಂಡನಿಗೆ ನಾನೆಂದರೆ ಇಷ್ಟವಿಲ್ಲ,” ಎಂದು ಹೇಳುತ್ತಾಳೆ. ಅವಳು ಅವನ ಇಷ್ಟದಂತೆಯೇ ಬಟ್ಟೆ ಧರಿಸುತ್ತಾಳೆ, ಅವನ ಇಷ್ಟದಂತೆಯೇ ಅಡುಗೆ ಮಾಡುತ್ತಾಳೆ. “ಡಾಕ್ಟರ್, ನಾನು ಏನು ಮಾಡಲಿ? ನೀವು ಹೇಳಿದಂತೆ ಕೇಳುತ್ತೇನೆ,” ಎನ್ನುತ್ತಾಳೆ. ಅವಳಿಗೆ ಸಾಂತ್ವನದ ಅಗತ್ಯವಿದೆ. ಅವಳು ಬಳ್ಳಿಯಂತೆ, ಆಧಾರವಿಲ್ಲದೆ ಬೆಳೆಯಲಾರಳು.

ಬಾಲ್ಯದಲ್ಲೇ ಇವರನ್ನು ಗುರುತಿಸುವುದು ಹೇಗೆ?

  • ತಾಯಿಯ ಸೀರೆಗೆ ಅಂಟಿಕೊಂಡಿರುವ, ಅವಳ ಹಿಂದೆಯೇ ಇರುವ ಮಗು.
  • ಅಮ್ಮಾ, ನಿನಗೆ ನಾನು ಇಷ್ಟನಾ?” ಎಂದು ಪದೇ ಪದೇ ಕೇಳುವ ಮಗು.
  • ಬಹಳ ಸುಲಭವಾಗಿ ಅಳುವ, ಮುದ್ದಿಸಿದರೆ ಸುಮ್ಮನಾಗುವ ಮಗು.

2.4. ನೇಟ್ರಮ್ ಮ್ಯೂರಿಯಾಟಿಕ್ಮ್ (Natrum Muriaticum):

"ಕರ್ತವ್ಯನಿಷ್ಠ ಹುತಾತ್ಮ" (ಜವಾಬ್ದಾರಿಹೊತ್ತು ಮೆಚ್ಚಿಸುವವ)

ವರ್ತನೆಗೆ ಕಾರಣ: ಪಲ್ಸಟಿಲಾಕ್ಕಿಂತ ಭಿನ್ನವಾಗಿ, ನೇಟ್ರಮ್ ಮ್ಯೂರ್ ರೋಗಿಗಳು ತಮ್ಮೊಳಗಿನ ಕರ್ತವ್ಯಪ್ರಜ್ಞೆ ಮತ್ತು ತಪ್ಪಿತಸ್ಥ ಮನೋಭಾವ, ಪಾಪ ಪ್ರಜ್ಞೆಯಿಂದ (Guilt) ಮೆಚ್ಚಿಸುತ್ತಾರೆ. ಇವರು “ಇಲ್ಲ” ಎಂದು ಹೇಳಲು ಸಾಧ್ಯವಾಗುವುದಿಲ್ಲ. ಇತರರಿಗೆ ನೋವುಂಟು ಮಾಡುವುದನ್ನು ತಪ್ಪಿಸಲು ಮತ್ತು ತಾವು ತಿರಸ್ಕರಿಸಲ್ಪಡುವ ಭಯದಿಂದ ಸೇವೆ ಮಾಡುತ್ತಾರೆ.

ಅವರು ಅನುಭವಿಸುವ ಯಾತನೆ: ಇವರು “ಮೌನ ದುಃಖ“ವನ್ನು (Silent Grief) ಅನುಭವಿಸುತ್ತಾರೆ. ಇವರು ತಮ್ಮ ಅಳುವುದನ್ನು ಯಾರಲ್ಲೂ ತೋರಿಸುವುದಿಲ್ಲ. ಸಾಂತ್ವನ ನೀಡಿದರೆ ಇವರಿಗೆ ಕೋಪ ಬರುತ್ತದೆ (Aggravation from consolation). ಇವರು ಮೈಗ್ರೇನ್ ತಲೆನೋವು, ಖಿನ್ನತೆ ಮತ್ತು ರಕ್ತಹೀನತೆಯಿಂದ ಬಳಲುತ್ತಾರೆ.

ಕಾಲ್ಪನಿಕ ಉದಾಹರಣೆ: ಮದುವೆಯಾಗದ ಹಿರಿಯ ಮಗಳು. ಅವಳು ತನ್ನ ಅನಾರೋಗ್ಯ ಪೀಡಿತ ಪೋಷಕರನ್ನು ನೋಡಿಕೊಳ್ಳುತ್ತಾಳೆ, ಮನೆಯ ಜವಾಬ್ದಾರಿ ಹೊರುತ್ತಾಳೆ. ಅವಳು ಎಂದೂ ದೂರುವುದಿಲ್ಲ. ಅವಳ ವೈಯಕ್ತಿಕ ಜೀವನದ ಬಗ್ಗೆ ಕೇಳಿದರೆ, ಅವಳು ಮೌನವಾಗುತ್ತಾಳೆ ಅಥವಾ ಕೋಪಗೊಳ್ಳುತ್ತಾಳೆ. ಅವಳು ತನ್ನ ಕೋಣೆಯಲ್ಲಿ ಒಂಟಿಯಾಗಿ ಅಳುತ್ತಾಳೆ, ಆದರೆ ಹೊರಗೆ ಕಠಿಣವಾಗಿ ಕಾಣಿಸಿಕೊಳ್ಳುತ್ತಾಳೆ.

ಬಾಲ್ಯದಲ್ಲೇ ಗುರುತಿಸುವುದು ಹೇಗೆ?

  • ಲಿಟಲ್ ಅಡಲ್ಟ್” (ಚಿಕ್ಕ ವಯಸ್ಸಿನಲ್ಲೇ ಪ್ರಬುದ್ಧತೆ). ವಯಸ್ಸಿಗೆ ಮೀರಿದ ಜವಾಬ್ದಾರಿ.
  • ಅತ್ತರೆ ಸಮಾಧಾನಪಡಿಸಲು ಹೋದರೆ ಇಷ್ಟಪಡದ ಮಗು.
  • ತುಂಬಾ ಗಂಭೀರವಾದ, ಬೇಗನೆ ಮುನಿಸಿಕೊಳ್ಳುವ ಸ್ವಭಾವ.

2.5. ಲೈಕೋಪೋಡಿಯಮ್ (Lycopodium):

"ರಾಜತಾಂತ್ರಿಕ ಹೇಡಿ" (ಅಸುರಕ್ಷತೆಗಾಗಿ ಇತರನ್ನು ಮೆಚ್ಚಿಸುವವ)

ವರ್ತನೆಗೆ ಕಾರಣ: ಲೈಕೋಪೋಡಿಯಮ್ ರೋಗಿಗಳು ತಮ್ಮ ಇಮೇಜ್ ಕಾಪಾಡಿಕೊಳ್ಳಲು ಮತ್ತು ಸಂಘರ್ಷವನ್ನು ಎದುರಿಸುವ ಧೈರ್ಯವಿಲ್ಲದ ಕಾರಣ ಜನರನ್ನು ಮೆಚ್ಚಿಸುತ್ತಾರೆ. ಇವರು ಮೇಲಾಧಿಕಾರಿಗಳಿಗೆ ಅಥವಾ ಬಲಿಷ್ಠರಿಗೆ ಬಗ್ಗಿ ನಡೆಯುತ್ತಾರೆ (Obsequious), ಆದರೆ ಮನೆಯಲ್ಲಿ ಅಥವಾ ತಮಗಿಂತ ದುರ್ಬಲರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ (Soft for Superiors and Hard for inferiors).

ಅವರು ಅನುಭವಿಸುವ ಯಾತನೆ: ಇವರಿಗೆ ಸೋಲಿನ ಭಯ (Fear of failure) ಕಾಡುತ್ತದೆ. “ನಾನು ವಿಫಲನಾದರೆ ಏನು?” ಎಂಬ ಆತಂಕದಿಂದ ಬಳಲುತ್ತಾರೆ. ಇದು ಗ್ಯಾಸ್ಟ್ರಿಕ್ ಸಮಸ್ಯೆಗಳು, ಲೈಂಗಿಕ ದೌರ್ಬಲ್ಯ ಮತ್ತು ಉಬ್ಬಸಕ್ಕೆ (Bloating) ಕಾರಣವಾಗುತ್ತದೆ.

ಕಾಲ್ಪನಿಕ ಉದಾಹರಣೆ: ಕಚೇರಿಯಲ್ಲಿ ಬಾಸ್ ಎದುರು ತಲೆಬಾಗುವ, ಎಲ್ಲದಕ್ಕೂ “ಎಸ್ ಸರ್” ಎನ್ನುವ ವ್ಯಕ್ತಿ. ಆದರೆ ಮನೆಗೆ ಬಂದರೆ ಹೆಂಡತಿ ಮತ್ತು ಮಕ್ಕಳ ಮೇಲೆ ರೇಗಾಡುತ್ತಾನೆ. ಊಟ ಸರಿಯಾದ ಸಮಯಕ್ಕೆ ಸಿಗದಿದ್ದರೆ ಮನೆಯನ್ನೇ ರಂಪ ಮಾಡುತ್ತಾನೆ. ಹೊರಗಿನ ಜಗತ್ತಿಗೆ ಇವನು ತುಂಬಾ ಒಳ್ಳೆಯವನು, ಆದರೆ ಒಳಗೆ ಅಸುರಕ್ಷಿತ.

ಬಾಲ್ಯದಲ್ಲೇ ಗುರುತಿಸುವುದು ಹೇಗೆ?

  • ಮನೆಯಲ್ಲಿ ರಾಕ್ಷಸ, ಹೊರಗೆ ದೇವತೆ” ಎಂಬಂತಹ ವರ್ತನೆ.
  • ಹೊಸ ವಿಷಯಗಳನ್ನು ಕಲಿಯಲು ಅಥವಾ ಹೊಸಬರನ್ನು ಮಾತನಾಡಿಸಲು ಹೆದರುವ ಮಗು (ಹೊಟ್ಟೆ ನೋವು ಬರುವುದು).
  • ಟೀಚರ್ ಎದುರು ಅಂಜುವ, ಆದರೆ ಸ್ನೇಹಿತರ ಮೇಲೆ ದಬ್ಬಾಳಿಕೆ ಮಾಡುವ ಸ್ವಭಾವ.

2.6. ಸೆಂಟೌರಿ (Centaury – Bach Flower):

"ಬಾಗಿಲಿನ ಕಾಲ್ಚಾಪೆ – Door Mat(ಬಾಗಿಲು ಹತ್ತಿರ ಹಾಕಿರುವ ಕಾಲೋರೆಸುವ ಬಟ್ಟೆ"

ಇದು ಹೋಮಿಯೋಪತಿಯ ಪಾಲಿಗ್ರೆಸ್ಟ್ ಅಲ್ಲದಿದ್ದರೂ, ಈ ವರ್ತನೆಯನ್ನು ಚೆನ್ನಾಗಿ ವಿವರಿಸುತ್ತದೆ. ಇವರು ಇಚ್ಛಾಶಕ್ತಿಯ ಕೊರತೆಯಿಂದಾಗಿ (Weak willed) “ಇಲ್ಲ” ಎಂದು ಹೇಳಲು ಸಾಧ್ಯವಾಗದೆ ಎಲ್ಲರಿಗೂ ಸೇವೆ ಮಾಡುತ್ತಾ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ.

3.0. ಸ್ವಂತಿಕೆಯೆಡೆಗೆ ಹೋಮಿಯೋಪಥಿಯ ಹಾದಿ

ವೈದ್ಯನಾಗಿ ನನ್ನ ಸಲಹೆ: ಮಕ್ಕಳನ್ನು ಗಮನಿಸಿ. ಅತಿಯಾದ ಒಳ್ಳೆಯತನ, ಅತಿಯಾದ ಅಚ್ಚುಕಟ್ಟುತನ, ಅತಿಯಾದ ಜವಾಬ್ದಾರಿ ಅಥವಾ ಅತಿಯಾದ ಭಯ ಕಂಡುಬಂದರೆ ಅವರನ್ನು ಹೊಗಳಬೇಡಿ.ಇಂತಹ ಅತಿಯಾದ ಪ್ರವೃತ್ತಿಗಳನ್ನು ಗುರುತಿಸುವುದು ದೀರ್ಘಕಾಲೀನ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.

ಇದರ ಉದ್ದೇಶವು ಜನರನ್ನು ಮೆಚ್ಚಿಸುವ ಸ್ವಭಾವ’ ಅಥವಾ ಸಹಾಯ ಮಾಡುವ ಗುಣವನ್ನು ತೆಗೆದುಹಾಕುವುದಲ್ಲ, ಬದಲಾಗಿ, ಯಾತನೆಗೆ ಕಾರಣವಾಗುವ, ಯಾವಾಗಲೂ ಇನ್ನೋಬ್ಬರ ಅನುಮೋದನೆಗಾಗಿ ಇರುವ ಒತ್ತಡದ ಅಗತ್ಯವನ್ನು ತೊಡೆದುಹಾಕಿ, ವ್ಯಕ್ತಿಯು ತನ್ನ ಆಂತರಿಕ ಸಂಘರ್ಷಗಳಿಂದ ಮುಕ್ತನಾಗಿ, ಭಾವನಾತ್ಮಕ ಸ್ವಾತಂತ್ರ್ಯವನ್ನು ಮತ್ತು ತನ್ನ ನಿಜವಾದ ಸ್ವರೂಪವನ್ನು ವ್ಯಕ್ತಪಡಿಸುವ ಸಾಮರ್ಥ್ಯವನ್ನು ಮರಳಿಸುಹುದು.

ಇದು ಕೇವಲ ರೋಗಲಕ್ಷಣಗಳನ್ನು ನಿವಾರಿಸುವ ಚಿಕಿತ್ಸೆಯಲ್ಲ, ಇದು ಸ್ವಂತಿಕೆಯೆಡೆಗಿನ ಒಂದು ಪರಿವರ್ತಕ ಪ್ರಯಾಣ.

ಈ ಮಾರ್ಗದರ್ಶನ ಲೇಖನ ಸ್ವಯಂ-ಚಿಕಿತ್ಸೆಗಾಗಿ ಅಲ್ಲ. ಹೋಮಿಯೋಪಥಿ ಔಷಧಗಳ ಆಯ್ಕೆ ಮತ್ತು ಅವುಗಳ ಡೋಸು; ಔಷಧ ಪ್ರಮಾಣವು ಅತ್ಯಂತ ಸಂಕೀರ್ಣವಾದ ಪ್ರಕ್ರಿಯೆಯಾಗಿದ್ದು, ತಪ್ಪು ಆಯ್ಕೆಯು ಹಾನಿಯನ್ನುಂಟುಮಾಡಬಹುದು. ಆದ್ದರಿಂದ, ಈ ರೀತಿಯ ಸಮಸ್ಯೆಗಳಿಗೆ ಅರ್ಹ ಮತ್ತು ಅನುಭವಿ ಹೋಮಿಯೋಪಥಿ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.